16.04.21 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆ
ಮತ್ತು ಆಸ್ತಿಯನ್ನು ನೆನಪು ಮಾಡಿರಿ ಆಗ ರಮಣೀಕವಾಗಿ ಬಿಡುತ್ತೀರಿ. ತಂದೆಯೂ ರಮಣೀಕವಾಗಿದ್ದಾರೆ
ಅಂದಮೇಲೆ ಅವರ ಮಕ್ಕಳೂ ರಮಣೀಕರಾಗಬೇಕು”
ಪ್ರಶ್ನೆ:
ದೇವತೆಗಳ
ಚಿತ್ರಗಳು ಎಲ್ಲರಿಗೆ ಏಕೆ ಆಕರ್ಷಣೆ ಮಾಡುತ್ತವೆ? ಅವರಲ್ಲಿ ಯಾವ ವಿಶೇಷ ಗುಣವಿದೆ?
ಉತ್ತರ:
ದೇವತೆಗಳು ಬಹಳ ರಮಣೀಕ ಮತ್ತು ಪವಿತ್ರರಾಗಿದ್ದಾರೆ. ರಮಣೀಕತೆಯ ಕಾರಣ ಅವರ ಚಿತ್ರಗಳ
ಆಕರ್ಷಣೆಯಾಗುತ್ತದೆ. ದೇವತೆಗಳಲ್ಲಿ ಪವಿತ್ರತೆಯ ವಿಶೇಷ ಗುಣವಿದೆ. ಈ ಗುಣದ ಕಾರಣವೇ ಅಪವಿತ್ರ
ಮನುಷ್ಯರು ಅವರ ಮುಂದೆ ಬಾಗುತ್ತಿರುತ್ತಾರೆ. ಯಾರಲ್ಲಿ ಸರ್ವ ದೈವೀ ಗುಣಗಳಿವೆಯೋ, ಯಾರು ಸದಾ
ಖುಷಿಯಾಗಿರುವರೋ ಅವರೇ ರಮಣೀಕರಾಗುತ್ತಾರೆ.
ಓಂ ಶಾಂತಿ.
ಆತ್ಮಗಳು ಮತ್ತು ಪರಮಾತ್ಮನ ಮೇಳವು ಎಷ್ಟು ವಿಚಿತ್ರವಾಗಿದೆ! ಇಂತಹ ಬೇಹದ್ದಿನ ತಂದೆಗೆ ನೀವೆಲ್ಲರೂ
ಮಕ್ಕಳಾಗಿದ್ದೀರಿ ಅಂದಮೇಲೆ ಮಕ್ಕಳೂ ಸಹ ಎಷ್ಟೊಂದು ರಮಣೀಕರಾಗಬೇಕು! ದೇವತೆಗಳು
ರಮಣೀಕರಾಗಿದ್ದಾರಲ್ಲವೆ ಆದರೆ ರಾಜಧಾನಿಯು ಬಹಳ ದೊಡ್ಡದಾಗಿದೆ. ಎಲ್ಲರೂ ಒಂದೇ ಸಮನಾಗಿ ರಮಣೀಕರಾಗಲು
ಸಾಧ್ಯವಿಲ್ಲ. ಆದರೂ ಸಹ ಕೆಲಕೆಲವು ಮಕ್ಕಳು ಬಹಳ ರಮಣೀಕರಾಗಿದ್ದಾರೆ. ಯಾರು ರಮಣೀಕರಾಗುತ್ತಾರೆ?
ಯಾರು ಸದಾ ಖುಷಿಯಲ್ಲಿರುವರೋ, ಯಾರಲ್ಲಿ ದೈವೀ ಗುಣಗಳಿವೆಯೋ ಅವರೇ ರಮಣೀಕರಾಗುತ್ತಾರೆ. ಈ ರಾಧೆ,
ಕೃಷ್ಣ ಮೊದಲಾದವರು ರಮಣೀಕರಲ್ಲವೆ. ಅವರಲ್ಲಿ ಬಹಳ-ಬಹಳ ಆಕರ್ಷಣೆಯಿದೆ. ಯಾವ ಆಕರ್ಷಣೆ? ಪವಿತ್ರತೆಯ
ಆಕರ್ಷಣೆಯಿದೆ ಏಕೆಂದರೆ ಇವರ ಆತ್ಮವೂ ಪವಿತ್ರ, ಶರೀರವೂ ಪವಿತ್ರವಾಗಿದೆ ಆದ್ದರಿಂದ ಪವಿತ್ರ ಆತ್ಮರು
ಅಪವಿತ್ರರನ್ನು ಆಕರ್ಷಿಸುತ್ತಾರೆ. ಅಪವಿತ್ರರು ಅವರ ಚರಣಗಳಿಗೆ ಬೀಳುತ್ತಾರೆ. ದೇವತೆಗಳಲ್ಲಿ
ಎಷ್ಟೊಂದು ಬಲವಿದೆ, ಭಲೆ ಸನ್ಯಾಸಿಗಳಿದ್ದಾರೆ ಆದರೆ ಅವರೂ ಸಹ ದೇವತೆಗಳ ಮುಂದೆ ಖಂಡಿತವಾಗಿ ತಲೆ
ಬಾಗುತ್ತಾರೆ. ಭಲೆ ಕೆಲವರಿಗೆ ಬಹಳ ಗರ್ವವಿರುತ್ತದೆ ಆದರೂ ಸಹ ದೇವತೆಗಳು ಅಥವಾ ಶಿವನ ಮುಂದೆ
ಖಂಡಿತ ಬಾಗುತ್ತಾರೆ. ದೇವಿಯರ ಚಿತ್ರದ ಮುಂದೆಯೂ ತಲೆ ಬಾಗುತ್ತಾರೆ ಏಕೆಂದರೆ ತಂದೆಯೂ
ರಮಣೀಕರಾಗಿದ್ದಾರೆ ಅಂದಮೇಲೆ ತಂದೆಯಿಂದ ಮಾಡಲ್ಪಟ್ಟಿರುವ ದೇವಿ-ದೇವತೆಗಳೂ ಸಹ ರಮಣೀಕರಾಗಿದ್ದಾರೆ.
ಅವರಲ್ಲಿ ಪವಿತ್ರತೆಯ ಆಕರ್ಷಣೆಯಿದೆ. ಅವರ ಆ ಆಕರ್ಷಣೆಯು ಇಲ್ಲಿಯವರೆಗೂ ನಡೆಯುತ್ತಿದೆ ಅಂದಮೇಲೆ
ಅವರಲ್ಲಿ ಎಷ್ಟು ಆಕರ್ಷಣೆಯಿದೆಯೋ ಅಷ್ಟು ನಿಮ್ಮಲ್ಲಿಯೂ ಇರಬೇಕು. ಅವರೇ ಈ ಲಕ್ಷ್ಮೀ-ನಾರಾಯಣರ ತರಹ
ನಾವಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ. ನಿಮ್ಮ ಈ ಸಮಯದ ಆಕರ್ಷಣೆಯು ಅವಿನಾಶಿಯಾಗಿ ಬಿಡುತ್ತದೆ,
ಎಲ್ಲರದೂ ಆಗುವುದಿಲ್ಲ. ನಂಬರ್ವಾರಂತೂ ಇದೆಯಲ್ಲವೆ. ಭವಿಷ್ಯದಲ್ಲಿ ಯಾರು ಶ್ರೇಷ್ಠ ಪದವಿಯನ್ನು
ಪಡೆಯುವವರಿದ್ದಾರೆಯೋ ಅವರಲ್ಲಿ ಇಲ್ಲಿಯೇ ಆಕರ್ಷಣೆಯಿರುವುದು ಏಕೆಂದರೆ ಆತ್ಮವು ಪವಿತ್ರವಾಗಿ
ಬಿಡುತ್ತದೆ. ನಿಮ್ಮಲ್ಲಿ ಯಾರು ವಿಶೇಷವಾಗಿ ನೆನಪಿನ ಯಾತ್ರೆಯಲ್ಲಿರುವರೋ ಅವರಲ್ಲಿ ಹೆಚ್ಚು
ಆಕರ್ಷಣೆಯಿರುತ್ತದೆ. ಯಾತ್ರೆಯಲ್ಲಿ ಪವಿತ್ರತೆಯು ಖಂಡಿತ ಇರುತ್ತದೆ. ಪವಿತ್ರತೆಯಲ್ಲಿಯೇ
ಆಕರ್ಷಣೆಯಿದೆ. ಪವಿತ್ರತೆಯ ಆಕರ್ಷಣೆಯು ಮತ್ತೆ ವಿದ್ಯೆಯಲ್ಲಿಯೂ ಆಕರ್ಷಣೆಯನ್ನು ತರುತ್ತದೆ. ಇದು
ಈಗ ನಮಗೆ ಅರ್ಥವಾಗಿದೆ, ನೀವು ಅವರ ಪರಿಚಯವನ್ನು ಅರಿತುಕೊಂಡಿದ್ದೀರಿ. ಅವರೂ ಸಹ ತಂದೆಯನ್ನು ಎಷ್ಟು
ನೆನಪು ಮಾಡಿರಬಹುದು! ಯಾರು ಇಷ್ಟೂ ದೊಡ್ಡ ರಾಜ್ಯವನ್ನು ಪಡೆದಿದ್ದಾರೆಯೋ ಅವರು ಅವಶ್ಯವಾಗಿ
ರಾಜಯೋಗದಿಂದಲೇ ಪಡೆದಿರಬೇಕಲ್ಲವೆ. ಈ ಸಮಯದಲ್ಲಿ ನೀವು ಈ ಪದವಿಯನ್ನು ಪಡೆಯುವುದಕ್ಕಾಗಿ
ಬಂದಿದ್ದೀರಿ. ತಂದೆಯು ಕುಳಿತು ನಿಮಗೆ ರಾಜಯೋಗವನ್ನು ಕಲಿಸುತ್ತಾರೆ. ಇದನ್ನು ಪಕ್ಕಾ ನಿಶ್ಚಯ
ಮಾಡಿಕೊಂಡು ಇಲ್ಲಿಗೆ ಬಂದಿದ್ದೀರಲ್ಲವೆ. ಅವರೇ ತಂದೆಯಾಗಿದ್ದಾರೆ, ಓದಿಸುವವರೂ ಅವರೇ ಆಗಿದ್ದಾರೆ
ಮತ್ತು ಜೊತೆ ಕರೆದುಕೊಂಡು ಹೋಗುವವರೂ ಆಗಿದ್ದಾರೆ ಅಂದಮೇಲೆ ಸದಾ ಈ ಗುಣವಿರಬೇಕು. ಸದಾ
ಹರ್ಷಿತಮುಖಿಯಾಗಿರಿ, ಯಾವಾಗ ತಂದೆಯ ನೆನಪಿನಲ್ಲಿರುತ್ತೀರೋ ಆಗ ಸದಾ ಹರ್ಷಿತರಾಗಿರುತ್ತೀರಿ ಮತ್ತು
ಆಸ್ತಿಯ ನೆನಪೂ ಇರುವುದು. ಇದರಿಂದ ಬಹಳ ರಮಣೀಕರಾಗುತ್ತೀರಿ. ನೀವು ಮಕ್ಕಳಿಗೆ ತಿಳಿದಿದೆ -
ನಾವಿಲ್ಲಿ ರಮಣೀಕರಾಗಿ ಭವಿಷ್ಯದಲ್ಲಿ ಇಂತಹ ರಮಣೀಕರಾಗುತ್ತೇವೆ. ಇಲ್ಲಿನ ವಿದ್ಯೆಯನ್ನೇ ಅಮರಪುರಿಗೆ
ತೆಗೆದುಕೊಂಡು ಹೋಗುತ್ತೇವೆ. ಈ ಸತ್ಯ ತಂದೆಯೇ ನಿಮಗೇ ಸತ್ಯ ಸಂಪಾದನೆ ಮಾಡಿಸುತ್ತಿದ್ದಾರೆ. ಈ
ಸತ್ಯ ಸಂಪಾದನೆಯೇ 21 ಜನ್ಮಗಳಿಗಾಗಿ ಜೊತೆ ಬರುತ್ತದೆ, ಮತ್ತೆ ಭಕ್ತಿಮಾರ್ಗದಲ್ಲಿ ಯಾವ ಸಂಪಾದನೆ
ಮಾಡಿಕೊಳ್ಳುತ್ತೀರೋ ಅದು ಅಲ್ಪಕಾಲದ ಸುಖಕ್ಕಾಗಿ. ಅದು ಸದಾ ಜೊತೆ ಬರುವುದಿಲ್ಲ ಅಂದಾಗ ಈ
ವಿದ್ಯೆಯಲ್ಲಿ ಮಕ್ಕಳು ಸದಾ ಎಚ್ಚರಿಕೆಯಿಂದಿರಬೇಕು. ನೀವು ಬಹಳ ಸಾಧಾರಣವಾಗಿದ್ದೀರಿ, ನಿಮಗೆ
ಓದಿಸುವವರೂ ಸಹ ಬಹಳ ಸಾಧಾರಣ ರೂಪದಲ್ಲಿದ್ದಾರೆ ಅಂದಮೇಲೆ ಓದುವವರೂ ಸಾಧಾರಣವಾಗಿಯೇ ಇರುತ್ತೀರಿ.
ಇಲ್ಲದಿದ್ದರೆ ಸಂಕೋಚವಾಗುವುದು. ನಾವು ಇಷ್ಟು ಅಧಿಕ ಬೆಲೆಯ ವಸ್ತ್ರಗಳನ್ನು ಹೇಗೆ ಧರಿಸುವುದು!
ನಮ್ಮ ಮಮ್ಮಾ-ಬಾಬಾರವರು ಎಷ್ಟು ಸಾಧಾರಣವಾಗಿದ್ದಾರೆ ಆದ್ದರಿಂದ ನಾವೂ ಸಾಧಾರಣರಗಿದ್ದೇವೆ. ಇವರು
ಏಕೆ ಸಾಧಾರಣವಾಗಿರುತ್ತಾರೆ? ಏಕೆಂದರೆ ವನವಾಸದಲ್ಲಿದ್ದಾರಲ್ಲವೆ. ನೀವೀಗ ಮರಳಿ ಹೋಗಬೇಕಲ್ಲವೆ.
ಇಲ್ಲಿ ಯಾವುದೂ ವಿವಾಹ ಇತ್ಯಾದಿಗಳನ್ನು ಮಾಡಿಕೊಳ್ಳಬಾರದು. ಅವರಂತೂ ವಿವಾಹ ಮಾಡುವಾಗ ಕುಮಾರಿಯು
ವನವಾಸದಲ್ಲಿರುತ್ತಾಳೆ. ಮೈಲಿಗೆ ಬಟ್ಟೆಗಳನ್ನು ಧರಿಸುತ್ತಾಳೆ. ತೈಲ ಇತ್ಯಾದಿಗಳನ್ನು ಹಚ್ಚುತ್ತಾಳೆ
ಏಕೆಂದರೆ ಮಾವನ ಮನೆಗೆ ಹೋಗುತ್ತಾಳೆ. ಬ್ರಾಹ್ಮಣರ ಮೂಲಕ ನಿಶ್ಚಿತಾರ್ಥವಾಗುತ್ತದೆ. ನೀವೂ ಸಹ ಈಗ
ಮಾವನ ಮನೆಗೆ ಹೋಗಬೇಕಾಗಿದೆ. ರಾವಣ ಪುರಿಯಿಂದ ರಾಮ ಪುರಿ ಅಥವಾ ವಿಷ್ಣು ಪುರಿಗೆ ಹೋಗಬೇಕಾಗಿದೆ.
ಅಂದಾಗ ಈ ವನವಾಸದ ಪದ್ಧತಿಯನ್ನು ಏಕೆ ಇಟ್ಟಿದ್ದಾರೆಂದರೆ ಯಾವುದೇ ದೇಹದ ಅಥವಾ ವಸ್ತ್ರ
ಮೊದಲಾದುವುಗಳ ಅಭಿಮಾನ ಬಾರದಿರಲಿ ಎಂದು. ಯಾರಿಗಾದರೂ ಕಡಿಮೆ ಬೆಲೆಯ ಸೀರೆಯಿದ್ದು ಅನ್ಯರನ್ನು
ನೋಡುತ್ತಾರೆಂದರೆ ಇವರಬಳಿ ಎಷ್ಟು ಒಳ್ಳೆಯ ಸೀರೆಯಿದೆಯೆಂದು ಸಂಕಲ್ಪ ನಡೆಯುತ್ತದೆ. ಇವರಂತೂ
ವನವಾಸದಲ್ಲಿಲ್ಲ ಎಂದುಕೊಳ್ಳುತ್ತಾರೆ ಆದರೆ ನೀವು ವನವಾಸದಲ್ಲಿ ಈ ರೀತಿ ಸಾಧಾರಣವಾಗಿರುತ್ತಲೂ
ಅನ್ಯರಿಗೆ ಇಷ್ಟು ಶ್ರೇಷ್ಠ ಜ್ಞಾನವನ್ನು ಕೊಡಿ ಮತ್ತು ಇಷ್ಟು ನಶೆಯೇರಿರಲಿ ಅದರಿಂದ ಅವರಿಗೇ ಬಾಣವು
ನಾಟಬೇಕು. ಭಲೆ ಪಾತ್ರೆ ತೊಳೆಯುತ್ತಾ ಇರಿ ಅಥವಾ ಬಟ್ಟೆಗಳನ್ನು ಒಗೆಯುತ್ತಾ ಇರಿ ಆದರೆ ಯಾರಾದರೂ
ನಿಮ್ಮ ಸನ್ಮುಖದಲ್ಲಿ ಬಂದರೆ ನೀವು ಕೂಡಲೇ ಅವರಿಗೆ ತಂದೆಯ ನೆನಪು ತರಿಸಿ. ನಿಮಗೆ ಆ ನಶೆಯೇರಿರಲಿ
ಮತ್ತು ಸಾಧಾರಣ ಉಡುಪಿನಲ್ಲಿದ್ದು ಕುಳಿತು ಯಾರಿಗಾದರೂ ಜ್ಞಾನವನ್ನು ತಿಳಿಸಿದ್ದೇ ಆದರೆ
ಆಶ್ಚರ್ಯಚಕಿತರಾಗುತ್ತಾರೆ, ಇವರಲ್ಲಿ ಎಷ್ಟು ಶ್ರೇಷ್ಠ ಜ್ಞಾನವಿದೆ ಎಂದು. ಈ ಜ್ಞಾನವು
ಗೀತೆಯದಾಗಿದೆ ಮತ್ತು ಭಗವಂತನೇ ಇದನ್ನು ತಿಳಿಸಿದ್ದಾರೆ. ರಾಜಯೋಗವು ಗೀತಾ ಜ್ಞಾನವೇ ಆಗಿದೆ
ಅಂದಮೇಲೆ ಇಷ್ಟು ನಶೆಯಿರುತ್ತದೆಯೇ? ಹೇಗೆ ತಂದೆಯು ತಮ್ಮ ಉದಾಹರಣೆಯನ್ನು ಕೊಡುತ್ತಾರೆ -
ತಿಳಿದುಕೊಳ್ಳಿ, ಮಕ್ಕಳ ಜೊತೆ ನಾನು ಆಟವಾಡುತ್ತಿರುತ್ತೇನೆ. ಅಂತಹ ಸಮಯದಲ್ಲಿ ಯಾರಾದರೂ ಜಿಜ್ಞಾಸು
ಎದುರಿಗೆ ಬಂದರೆ ಅವರಿಗೆ ತಕ್ಷಣ ತಂದೆಯ ಪರಿಚಯವನ್ನು ಕೊಡುತ್ತೇನೆ. ಯೋಗದ ಶಕ್ತಿ, ಯೋಗ
ಶಕ್ತಿಯಿರುವ ಕಾರಣ ಅವರು ಅಲ್ಲಿಯೇ ನಿಂತು ಆಶ್ಚರ್ಯ ಚಕಿತರಾಗುತ್ತಾರೆ. ಇಂತಹ
ಸಾಧಾರಣವಾಗಿರುವವರಾಗಿದ್ದಾರೆ ಆದರೆ ಇವರಲ್ಲಿ ಇಷ್ಟೊಂದು ಶಕ್ತಿಯಿದೆಯಲ್ಲವೆ! ಆದರೂ ಸಹ ಅವರು ಏನೂ
ಹೇಳಲು ಸಾಧ್ಯವಾಗುವುದಿಲ್ಲ. ಬಾಯಿಂದ ಯಾವುದೇ ಮಾತುಗಳೂ ಬರುವುದಿಲ್ಲ. ಹೇಗೆ ನೀವು ವಾಣಿಯಿಂದ
ದೂರವಾಗುತ್ತೀರೋ ಹಾಗೆಯೇ ಅವರೂ ಸಹ ವಾಣಿಯಿಂದ ದೂರವಾಗುತ್ತಾರೆ. ಈ ನಶೆಯು ಸದಾ
ಆಂತರ್ಯದಲ್ಲಿರಬೇಕಾಗಿದೆ. ಯಾವುದೇ ಸಹೋದರ ಅಥವಾ ಸಹೋದರಿಯು ಬಂದರೆ ಅವರನ್ನು ನಿಲ್ಲಿಸಿ ವಿಶ್ವದ
ಮಾಲೀಕರಾಗುವ ಮತವನ್ನು ಕೊಡಬಹುದು. ಆಂತರ್ಯದಲ್ಲಿ ಇದೇ ನಶೆಯಿರಬೇಕು. ತಮ್ಮ ಲಗನ್ನಲ್ಲಿ
ಮಗ್ನರಾಗಬೇಕಾಗಿದೆ. ತಂದೆಯು ಸದಾ ಹೇಳುತ್ತಾರೆ - ನಿಮ್ಮಲ್ಲಿ ಜ್ಞಾನವಂತೂ ಇದೆ ಆದರೆ ಯೋಗದ
ಹರಿತವಿಲ್ಲ. ಪವಿತ್ರತೆ ಮತ್ತು ನೆನಪಿನಲ್ಲಿ ಇರುವುದರಿಂದಲೇ ಜ್ಞಾನದ ಹರಿತ ಬರುತ್ತದೆ. ನೆನಪಿನ
ಯಾತ್ರೆಯಿಂದ ನೀವು ಪವಿತ್ರರಾಗುತ್ತೀರಿ, ಶಕ್ತಿಯೂ ಸಹ ಸಿಗುತ್ತದೆ. ಜ್ಞಾನವಂತೂ ಧನದ ಮಾತಾಗಿದೆ,
ಹೇಗೆ ಶಾಲೆಯಲ್ಲಿ ಎಂ.ಎ., ಬಿ.ಎ., ಇತ್ಯಾದಿಗಳನ್ನು ಮಾಡಿದನಂತರ ಹಣ ಸಿಗುತ್ತದೆ, ಇಲ್ಲಿ ಬೇರೆ
ಮಾತಾಗಿದೆ. ಇಲ್ಲಂತೂ ಬೇರೆ ಮಾತಾಗಿದೆ. ಭಾರತದ ಪ್ರಾಚೀನ ಯೋಗವು ಬಹಳ ಪ್ರಸಿದ್ಧವಾಗಿದೆ. ಇದೇ
ನೆನಪಾಗಿದೆ. ತಂದೆಯು ಸರ್ವಶಕ್ತಿವಂತನಾಗಿರುವ ಕಾರಣ ಮಕ್ಕಳಿಗೆ ತಂದೆಯಿಂದ ಶಕ್ತಿ ಸಿಗುತ್ತದೆ.
ಮಕ್ಕಳಿಗೆ ಆಂತರ್ಯದಲ್ಲಿರಬೇಕಾಗಿದೆ - ನಾವು ಮಕ್ಕಳು ತಂದೆಯ ಸಂತಾನರಾಗಿದ್ದೇವೆ ಆದರೆ ತಂದೆಯಷ್ಟು
ಪವಿತ್ರರಾಗಿಲ್ಲ, ಈಗ ಆಗಬೇಕಾಗಿದೆ. ಇದು ನಮ್ಮ ಗುರಿ-ಉದ್ದೇಶವಾಗಿದೆ. ಯೋಗದಿಂದ ನೀವು
ಪವಿತ್ರರಾಗುತ್ತೀರಿ, ಯಾರು ಅನನ್ಯ ಮಕ್ಕಳು ಇರುತ್ತಾರೆಯೋ ಅವರು ನಿತ್ಯವೂ ಇದೇ ಚಿಂತನೆಯನ್ನು
ಮಾಡುತ್ತಿರುತ್ತಾರೆ. ಯಾರಾದರೂ ಬಂದರೆ ಅವರಿಗೆ ನಾವು ದಾರಿ ತೋರಿಸೋಣವೆಂಬ ದಯೆ ಬರಬೇಕು. ಪಾಪ!
ಜ್ಞಾನವಿಲ್ಲದ ಕುರುಡರಾಗಿದ್ದಾರೆ ಎಂದು. ಕುರುಡರಿಗೆ ಊರುಗೋಲನ್ನು ಕೊಟ್ಟು ನಡೆಸುತ್ತಾರಲ್ಲವೆ.
ಇವರೆಲ್ಲರೂ ಕುರುಡರಾಗಿದ್ದಾರೆ ಏಕೆಂದರೆ ಜ್ಞಾನದ ಚಕ್ಷುವಿಲ್ಲ.
ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ನೀವು ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಇಡೀ
ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನೂ ಸಹ ನಾವೀಗ ತಿಳಿದುಕೊಂಡಿದ್ದೇವೆ, ಇವೆಲ್ಲವೂ ಭಕ್ತಿಮಾರ್ಗದ
ಮಾತುಗಳಾಗಿವೆ. ನಿಮಗೆ ಮೊದಲೇ ತಿಳಿದುಕೊಂಡಿದ್ದೀರಿ, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು
ನೋಡಬಾರದು..... ಈ ಚಿತ್ರಗಳನ್ನು ಏಕೆ ಮಾಡಿದ್ದಾರೆ? ಪ್ರಪಂಚದಲ್ಲಿ ಯಾರೂ ಇದರ ಅರ್ಥವನ್ನು
ತಿಳಿದುಕೊಂಡಿಲ್ಲ ಆದರೆ ಇದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಹೇಗೆ ಜ್ಞಾನ
ಸಾಗರನಾಗಿದ್ದಾರೆಯೋ ಅದೇರೀತಿ ನೀವೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಜ್ಞಾನ
ಸಾಗರರಾಗುತ್ತಿದ್ದೀರಿ. ಕೆಲಕೆಲವರಿಗೆ ತುಂಬಾ ನಶೆಯೇರಿರುತ್ತದೆ - ವಾಹ್! ಬಾಬನಿಂದ ಪೂರ್ಣ
ಆಸ್ತಿಯನ್ನು ತೆಗೆದುಕೊಳ್ಳದೆ ಬಾಬನ ಮಗುವಾಗಿ ಏನು ಮಾಡಿದೆ! ಪ್ರತಿದಿನ ರಾತ್ರಿಯಲ್ಲಿ ತಮ್ಮ
ಲೆಕ್ಕ ಪತ್ರವನ್ನು ನೋಡಿಕೊಳ್ಳಬೇಕು, ಬಾಬಾ ವ್ಯಾಪಾರಿಯಾಗಿದ್ದಾರೆ. ವ್ಯಾಪಾರಿಗಳಿಗೆ ತಮ್ಮ ಲೆಕ್ಕ
ಪತ್ರವನ್ನು ನೋಡುವುದು ಸಹಜವಾಗಿರುತ್ತದೆ. ಸರ್ಕಾರಿ ನೌಕರರಿಗೆ ಲೆಕ್ಕ ಪತ್ರವನ್ನು ತೆಗೆಯಲು
ಬರುವುದಿಲ್ಲ, ಅವರು ಸೌಧಾಗರರೂ ಆಗಿರುವುದಿಲ್ಲ. ವ್ಯಾಪಾರಿಗಳು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ,
ನೀವು ವ್ಯಾಪಾರಿಗಳಾಗಿದ್ದೀರಿ. ನೀವು ನಿಮ್ಮ ಲಾಭ-ನಷ್ಟದ ತಿಳಿದುಕೊಂಡಿದ್ದೀರಿ. ಪ್ರತಿದಿನ ತಮ್ಮ
ಅನೂಕೂಲದಂತೆ ಖಾತೆಯನ್ನು ನೋಡಿಕೊಳ್ಳಿ – ಲಾಭವಾಗಿದೆಯೇ ಅಥವಾ ನಷ್ಟವಾಗಿದೆಯೋ? ನೀವಂತೂ
ಸೌಧಾಗರರಲ್ಲವೆ. ಗಾಯನವಿದೆಯಲ್ಲವೆ - ತಂದೆಯು ಸೌಧಾಗಾರ್, ರತ್ನಾಗರ ಆಗಿದ್ದಾರೆ. ಅವಿನಾಶಿ ಜ್ಞಾನ
ರತ್ನಗಳ ವ್ಯಾಪಾರ ಮಾಡುತ್ತಾರೆ ಎಂಬುದನ್ನೂ ಸಹ ನಂಬರ್ವಾರ್ ಪುರುಷಾರ್ಥದನುಸಾರ
ತಿಳಿದುಕೊಂಡಿದ್ದೀರಿ. ಎಲ್ಲರೂ ತೀಕ್ಷ್ಣ ಬುದ್ಧಿಯವರಾಗಿರುವುದಿಲ್ಲ. ಒಂದು ಕಿವಿಯಿಂದ ಕೇಳಿ
ಇನ್ನೊಂದು ಕಿವಿಯಿಂದ ಹೊರಟು ಹೋಗುತ್ತದೆ. ಚೀಲದಲ್ಲಿ ರಂಧ್ರವಿದ್ದರೆ ಅದರಿಂದ ಸೋರಿ ಹೋಗುತ್ತದೆ,
ಜೋಳಿಗೆ ತುಂಬುವುದಿಲ್ಲ. ತಂದೆಯು ತಿಳಿಸುತ್ತಾರೆ – ಧನ ದಾನ ಮಾಡುವುದರಿಂದ ಧನ ಖಾಲಿಯಾಗುವುದಿಲ್ಲ.
ಅವಿನಾಶಿ ಜ್ಞಾನ ರತ್ನವಲ್ಲವೆ. ತಂದೆಯು ರೂಪಭಸಂತರಾಗಿದ್ದಾರೆ, ಆತ್ಮವೇನೋ ಹೌದು, ಅವರಲ್ಲಿ
ಜ್ಞಾನವಿದೆ. ನೀವು ಮಕ್ಕಳೂ ಸಹ ರೂಪಭಸಂತರಾಗಿದ್ದೀರಿ, ಆತ್ಮದಲ್ಲಿ ಜ್ಞಾನವು ತುಂಬುತ್ತಾ ಇರುತ್ತದೆ.
ಅವರಿಗೆ ರೂಪವಿದೆ, ಭಲೆ ಆತ್ಮವು ಚಿಕ್ಕದಾಗಿದೆ. ರೂಪವಂತೂ ಇದೆಯಲ್ಲವೆ, ಅವರನ್ನೂ
ತಿಳಿದುಕೊಳ್ಳಬಹುದು, ಪರಮಾತ್ಮನನ್ನೂ ತಿಳಿದುಕೊಳ್ಳಬಹುದು. ಸೋಮನಾಥನ ಭಕ್ತಿಮಾಡುವವರು ಇಷ್ಟು
ಚಿಕ್ಕ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಪೂಜೆ ಮಾಡಲು ಎಷ್ಟೊಂದು ಲಿಂಗಗಳನ್ನು ಮಾಡುತ್ತಾರೆ!
ಶಿವ ತಂದೆಯನ್ನು ದೊಡ್ಡ-ದೊಡ್ಡದಾಗಿ ಮಾಡುತ್ತಾರೆ. ಇರುವುದೇನೂ ಚಿಕ್ಕ ರೂಪವಾಗಿದೆ ಆದರೆ ಅವರ
ಸ್ಥಾನವಂತೂ ಬಹಳ ಶ್ರೇಷ್ಠವಲ್ಲವೆ.
ಈ ಜಪ-ತಪಗಳಿಂದ ಯಾವುದೇ ಲಾಭವಾಗುವುದಿಲ್ಲವೆಂದು ತಂದೆಯು ಕಲ್ಪದ ಹಿಂದೆ ತಿಳಿಸಿದ್ದರು. ಎಲ್ಲವನ್ನೂ
ಮಾಡುತ್ತಾ ಕೆಳಗಿಳಿಯುತ್ತಾ ಹೋಗುತ್ತಾರೆ, ಏಣಿಯನ್ನು ಇಳಿಯುತ್ತಲೇ ಹೋಗುತ್ತಾರೆ. ನಿಮ್ಮದಂತೂ ಈಗ
ಏರುವ ಕಲೆಯಾಗಿದೆ. ನೀವಂತೂ ಬ್ರಾಹ್ಮಣರು ಮೊದಲನೇ ನಂಬರಿನ ಜಿನ್ಹ್ ಆಗಿದ್ದೀರಿ. ಜಿನ್ಹ್ನ ಒಂದು
ಕಥೆಯಿದೆಯಲ್ಲವೆ - ನನಗೆ ಕೆಲಸ ಕೊಡಿ, ಇಲ್ಲದಿದ್ದರೆ ನಿಮ್ಮನ್ನು ತಿಂದು ಬಿಡುತ್ತೇನೆ ಎಂದು
ಹೇಳಿದನು, ಆದ್ದರಿಂದ ಏಣಿಯನ್ನು ಹತ್ತುವುದು-ಇಳಿಯುವ ಕೆಲಸ ಕೊಟ್ಟರು ಆದ್ದರಿಂದ ಅವನಿಗೆ ಕೆಲಸ
ಸಿಕ್ಕಿತು. ಈ ಬೇಹದ್ದಿನ ಏಣಿಯನ್ನು ನೀವೇ ಇಳಿಯುತ್ತೀರಿ ಮತ್ತು ನೀವೇ ಹತ್ತುತ್ತೀರಿ ಎಂದು ತಂದೆಯೂ
ತಿಳಿಸಿದ್ದಾರೆ. ನೀವೇ ಪೂರ್ಣ ಏಣಿಯನ್ನು ಇಳಿಯುತ್ತೀರಿ ಮತ್ತು ಹತ್ತುತ್ತೀರಿ, ನೀವೇ ಜಿನ್ಹ್
ಆಗಿದ್ದೀರಿ. ಬೇರೆ ಯಾರೂ ಸಹ ಏಣಿಯನ್ನು ಪೂರ್ಣ ಹತ್ತುವುದಿಲ್ಲ. ಏಣಿಯ ಪೂರ್ಣ ಜ್ಞಾನವನ್ನು
ಪಡೆಯುವುದರಿಂದ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಮತ್ತೆ ಇಳಿಯುತ್ತೀರಿ, ಹತ್ತುತ್ತೀರಿ.
ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ತಂದೆಯಾಗಿದ್ದೇನೆ, ನನ್ನನ್ನು ನೀವು ಪತಿತ-ಪಾವನನೆಂದು
ಕರೆಯುತ್ತೀರಲ್ಲವೆ. ನಾನು ಸರ್ವಶಕ್ತಿವಂತನಾಗಿದ್ದೇನೆ ಏಕೆಂದರೆ ನಾನಾತ್ಮ, ಸದಾ 100%
ಪವಿತ್ರನಾಗಿದ್ದೇನೆ. ನಾನು ಬಿಂದು ರೂಪ ಅಥಾರಿಟಿಯಾಗಿದ್ದೇನೆ. ಎಲ್ಲಾ ಶಾಸ್ತ್ರಗಳ ರಹಸ್ಯವನ್ನು
ತಿಳಿದುಕೊಂಡಿದ್ದೇನೆ, ಇದು ಎಷ್ಟು ಆಶ್ಚರ್ಯವಾಗಿದೆಯಲ್ಲವೆ. ಇವೆಲ್ಲವೂ ಬಹಳ ಆಶ್ಚರ್ಯಕರವಾದ
ಜ್ಞಾನವಾಗಿದೆ, ಈ ರೀತಿ ಎಂದೂ ಕೇಳಿರುವುದಿಲ್ಲ – ಆತ್ಮದಲ್ಲಿಯೇ 84 ಜನ್ಮಗಳ ಪಾತ್ರವು ಅಡಕವಾಗಿದೆ.
ಇದು ಎಂದೂ ಅಳಿಸಿ ಹೋಗುವುದಿಲ್ಲ, ನಡೆಯುತ್ತಲೇ ಇರುತ್ತದೆ. 84 ಜನ್ಮಗಳ ಚಕ್ರ ಸುತ್ತುತ್ತಾ
ಬರುತ್ತದೆ. 84 ಜನ್ಮಗಳ ರೆಕಾರ್ಡ್ ಇದರಲ್ಲಿ ತುಂಬಿದೆ, ಇಷ್ಟು ಚಿಕ್ಕ ಆತ್ಮದಲ್ಲಿ ಎಷ್ಟೊಂದು
ಜ್ಞಾನವಿದೆ! ತಂದೆಯಲ್ಲಿಯೂ ಸಹ ಇದೆ ಅಂದಾಗ ನೀವು ಮಕ್ಕಳಲ್ಲಿಯೂ ಇದೆ. ಎಷ್ಟೊಂದು
ಪಾತ್ರವನ್ನಭಿನಯಿಸುತ್ತಾರೆ ಆದರೆ ಈ ಪಾತ್ರವು ಎಂದೂ ಅಳಿಸಿ ಹೋಗುವುದಿಲ್ಲ. ಆತ್ಮವನ್ನು ಈ
ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆತ್ಮವಂತೂ ಬಿಂದುವೇ ಆಗಿದೆ ಅಂದಾಗ ತಂದೆಯೂ ಸಹ ಹೇಳುತ್ತಾರೆ -
ನಾನೂ ಸಹ ಬಿಂದುವಾಗಿದ್ದೇನೆ. ಇದನ್ನು ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ. ನೀವು ಬೇಹದ್ದಿನ
ತ್ಯಾಗಿ ಮತ್ತು ರಾಜಋಷಿಗಳಾಗಿದ್ದೀರಿ ಅಂದಾಗ ಎಷ್ಟೊಂದು ನಶೆಯೇರಿರಬೇಕಲ್ಲವೆ! ರಾಜ ಋಷಿಗಳು
ಸಂಪೂರ್ಣ ಪವಿತ್ರರಾಗಿರುತ್ತಾರೆ. ರಾಜ ಋಷಿಗಳೆಂದರೆ ಸೂರ್ಯವಂಶಿ-ಚಂದ್ರವಂಶಿಗಳಾಗಿದ್ದಾರೆ ಯಾರು
ಇಲ್ಲಿ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಹೇಗೆ ನೀವೂ ಸಹ ಈಗ ಪ್ರಾಪ್ತಿ
ಮಾಡಿಕೊಳ್ಳುತ್ತಿದ್ದೀರಿ. ಇದನ್ನು ಮಕ್ಕಳು ತಿಳಿದುಕೊಳ್ಳುತ್ತೀರಿ - ನಾವು ಹಿಂತಿರುಗಿ
ಹೋಗುತ್ತೇವೆ. ಅಂಬಿಗನ ದೋಣಿಯಲ್ಲಿ ಕುಳಿತಿದ್ದೇವೆ ಮತ್ತು ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂದೂ
ತಿಳಿದುಕೊಂಡಿದ್ದೀರಿ. ಅವಶ್ಯವಾಗಿ ಹೋಗಬೇಕಾಗಿದೆ, ಹಳೆಯ ಶಾಂತಿಧಾಮದ ಮೂಲಕ ಹಳೆಯ ಪ್ರಪಂಚದಿಂದ
ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ. ಯಾವಾಗಲೂ ಸಹ ಇದು ಮಕ್ಕಳ ಬುದ್ಧಿಯಲ್ಲಿ ಇರಬೇಕಾಗಿದೆ.
ಸತ್ಯಯುಗದಲ್ಲಿ ನಾವು ಇದ್ದಾಗ ಯಾವುದೇ ಬೇರೆ ಖಂಡವಿರಲಿಲ್ಲ, ನಮ್ಮದೇ ರಾಜ್ಯವಿತ್ತು. ಪುನಃ ಈಗ
ಯೋಗಬಲದಿಂದ ನಮ್ಮ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ ಏಕೆಂದರೆ ನಿಮಗೆ ತಿಳಿಸಲಾಗಿದೆ -
ಯೋಗಬಲದಿಂದಲೇ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಸಾಧ್ಯ, ಬಾಹುಬಲದಿಂದ ಪಡೆಯಲು ಸಾಧ್ಯವಿಲ್ಲ.
ಇದು ಬೇಹದ್ದಿನ ನಾಟಕವಾಗಿದೆ, ಆಟವು ಮಾಡಲ್ಪಟ್ಟಿರುವುದಾಗಿದೆ. ಈ ಆಟದ ಜ್ಞಾನವನ್ನು ತಂದೆಯೇ
ಕೊಡುತ್ತಾರೆ. ಪ್ರಾರಂಭದಿಂದ ಹಿಡಿದು ಇಡೀ ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿಸುತ್ತಾರೆ. ನೀವು
ಸೂಕ್ಷ್ಮವತನ, ಮೂಲವತನದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೀರಿ, ಸ್ಥೂಲ ವತನದಲ್ಲಿ ಇವರ
ರಾಜ್ಯವಿತ್ತು ಅರ್ಥಾತ್ ನಮ್ಮ ರಾಜ್ಯವಿತ್ತು. ಹೇಗೆ ನೀವು ಏಣಿಯನ್ನು ಇಳಿಯುತ್ತೀರೋ ಅದೂ ಸಹ
ನೆನಪಿಗೆ ಬಂದಿದೆ. ಏಣಿಯನ್ನು ಏರುವುದು, ಇಳಿಯುವ ಆಟವು ಮಕ್ಕಳ ಬುದ್ಧಿಯಲ್ಲಿ ಕುಳಿತಿದೆ. ಈ
ಪ್ರಪಂಚದ ಇತಿಹಾಸ-ಭೂಗೋಳವು ಹೇಗೆ ಪುನರಾವರ್ತನೆಯಾಗುವುದು ಎಂಬುದು ಬುದ್ಧಿಯಲ್ಲಿದೆ, ಇದರಲ್ಲಿ
ನಮ್ಮದು ಹೀರೋ-ಹೀರೋಯಿನ್ನ ಪಾತ್ರವಿದೆ. ನಾವೇ ಸೋಲನ್ನನುಭಿಸುತ್ತೇವೆ ಮತ್ತು ನಾವೇ ಗೆಲುವನ್ನು
ಪಡೆಯುತ್ತೇವೆ ಆದ್ದರಿಂದ ಹೀರೋ-ಹೀರೋಯಿನ್ ಎಂದು ಹೆಸರನ್ನಿಡಲಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಈಗ ನಾವು
ವನವಾಸದಲ್ಲಿದ್ದೇವೆ ಆದುದರಿಂದ ಬಹಳ-ಬಹಳ ಸಾಧಾರಣವಾಗಿರಬೇಕಾಗಿದೆ. ದೇಹದ ಅಥವಾ ಯಾವುದೇ ವಸ್ತ್ರಗಳ
ಅಭಿಮಾನವಿರಬಾರದು. ಯಾವುದೇ ಕಾರ್ಯವನ್ನು ಮಾಡುತ್ತಾ ತಂದೆಯ ನೆನಪಿನಲ್ಲಿದ್ದು
ನಶೆಯೇರಿಸಿಕೊಳ್ಳಬೇಕಾಗಿದೆ.
2) ನಾವು ಬೇಹದ್ದಿನ
ತ್ಯಾಗಿ ಮತ್ತು ರಾಜ ಋಷಿಯಾಗಿದ್ದೇವೆ, ಇದೇ ನಶೆಯಲ್ಲಿದ್ದು ಪವಿತ್ರರಾಗಬೇಕಾಗಿದೆ. ಜ್ಞಾನ ಧನದಿಂದ
ಸಂಪನ್ನರಾಗಿ ದಾನ ಮಾಡಬೇಕಾಗಿದೆ. ಸತ್ಯ-ಸತ್ಯ ಸೌಧಾಗರರಾಗಿ ತಮ್ಮ ಲೆಕ್ಕ ಪತ್ರವನ್ನು ಇಡಬೇಕಾಗಿದೆ.
ವರದಾನ:
ನೆನಪಿನ
ಸರ್ಚ್ಲೈಟ್ ಮೂಲಕ ವಾಯುಮಂಡಲವನ್ನು ತಯಾರು ಮಾಡುವಂತಹ ವಿಜಯಿ ರತ್ನ ಭವ.
ಸೇವಾಧಾರಿ ಆತ್ಮರ
ಮಸ್ತಕದಲ್ಲಿ ವಿಜಯದ ತಿಲಕವು ಇದ್ದೇ ಇರುತ್ತದೆ ಆದರೆ ಯಾವ ಸ್ಥಾನದಲ್ಲಿ ಸೇವೆ ಮಾಡಬೇಕು, ಆ
ಸ್ಥಾನಕ್ಕೆ ಮುಂಚಿತವಾಗಿಯೇ ಸರ್ಚ್ಲೈಟ್ನ ಪ್ರಕಾಶತೆಯನ್ನು ಪ್ರಕಂಪಿಸಬೇಕು. ನೆನಪಿನ
ಸರ್ಚ್ಲೈಟ್ನಿಂದ ಅಂತಹ ವಾಯುಮಂಡಲವು ತಯಾರಾಗಿ ಬಿಡುತ್ತದೆ, ಅದರಿಂದ ಅನೇಕ ಆತ್ಮರು ಸಹಜವಾಗಿಯೇ
ಸಮೀಪಕ್ಕೆ ಬಂದು ಬಿಡುತ್ತಾರೆ. ನಂತರ ಕಡಿಮೆ ಸಮಯದಲ್ಲಿ ಸಫಲತೆಯು ಸಾವಿರಪಟ್ಟು ಸಿಗುತ್ತದೆ.
ಇದಕ್ಕಾಗಿ ನಾವು ವಿಜಯಿ ರತ್ನಗಳಾಗಿದ್ದೇವೆ ಎಂಬ ಧೃಡ ಸಂಕಲ್ಪವನ್ನು ಮಾಡಿರಿ, ಇದರಿಂದ ಪ್ರತಿಯೊಂದು
ಕರ್ಮದಲ್ಲಿ ವಿಜಯವು ಸಮಾವೇಶವಾಗಿದೆ.
ಸ್ಲೋಗನ್:
ಯಾವ ಸೇವೆಯು ಸ್ವಯಂನ್ನು
ಅಥವಾ ಅನ್ಯರನ್ನು ತೊಂದರೆ ಮಾಡುತ್ತದೆ, ಆ ಸೇವೆಯು ಸೇವೆಯಲ್ಲ ಹೊರೆಯಾಗಿದೆ.