26.12.19         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಸಹಯೋಗಿಗಳಾಗಿ ಈ ಕಲಿಯುಗೀ ಪರ್ವತವನ್ನು ಸತ್ಯಯುಗವನ್ನಾಗಿ ಮಾಡಬೇಕಾಗಿದೆ, ಪುರುಷಾರ್ಥ ಮಾಡಿ ಹೊಸ ಪ್ರಪಂಚಕ್ಕಾಗಿ ಬಹಳ ಒಳ್ಳೆಯ ಆಸನವನ್ನು ಕಾದಿರಿಸಬೇಕಾಗಿದೆ”

ಪ್ರಶ್ನೆ:
ತಂದೆಯ ಕರ್ತವ್ಯವೇನಾಗಿದೆ? ಯಾವ ಕರ್ತವ್ಯವನ್ನು ಪೂರ್ಣ ಮಾಡಲು ಸಂಗಮಯುಗದಲ್ಲಿ ತಂದೆಯು ಬರಬೇಕಾಗುತ್ತದೆ?

ಉತ್ತರ:
ರೋಗಿ ಮತ್ತು ದುಃಖಿ ಮಕ್ಕಳನ್ನು ಸುಖಿಯನ್ನಾಗಿ ಮಾಡುವುದು, ಮಾಯೆಯ ಜಾಲದಿಂದ ಬಿಡಿಸಿ ಅಪಾರ ಸುಖವನ್ನು ಕೊಡುವುದು - ಇದು ತಂದೆಯ ಜವಾಬ್ದಾರಿಯಾಗಿದೆ. ಅದನ್ನು ಸಂಗಮಯುಗದಲ್ಲಿಯೇ ತಂದೆಯು ಪೂರ್ಣ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮೆಲ್ಲರ ಚಿಂತೆಯನ್ನು ಕಳೆಯಲು, ಎಲ್ಲರ ಮೇಲೆ ಕೃಪೆ ತೋರಲು ಬಂದಿದ್ದೇನೆ. ಈಗ ಪುರುಷಾರ್ಥ ಮಾಡಿ 21 ಜನ್ಮಗಳಿಗಾಗಿ ತಮ್ಮ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಿ.

ಗೀತೆ:
ಭೋಲಾನಾಥನಿಗಿಂತ ಭಿನ್ನ ಯಾರೂ ಇಲ್ಲ....

ಓಂ ಶಾಂತಿ.
ಭೋಲಾನಾಥ ಶಿವ ಭಗವಾನುವಾಚ. ಬ್ರಹ್ಮಾರವರ ಮುಖ ಕಮಲದಿಂದ ತಂದೆಯು ತಿಳಿಸುತ್ತಾರೆ - ಇದು ವಿಭಿನ್ನ ಧರ್ಮಗಳ ಮನುಷ್ಯ ಸೃಷ್ಟಿ ವೃಕ್ಷವಾಗಿದೆಯಲ್ಲವೆ. ಈ ಕಲ್ಪವೃಕ್ಷ ಅಥವಾ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ಮಕ್ಕಳಿಗೆ ತಿಳಿಸುತ್ತಿದ್ದೇನೆ. ಗೀತೆಯಲ್ಲಿಯೂ ಇವರ ಮಹಿಮೆಯಿದೆ. ಶಿವ ತಂದೆಯ ಜನ್ಮವು ಇಲ್ಲಿಯೇ ಆಗುತ್ತದೆ. ಆದ್ದರಿಂದ ನಾನು ಭಾರತದಲ್ಲಿಯೇ ಬಂದಿದ್ದೇನೆಂದು ತಂದೆಯು ಹೇಳುತ್ತಾರೆ. ಶಿವ ತಂದೆಯು ಯಾವಾಗ ಬಂದಿದ್ದರೆಂದು ಮನುಷ್ಯರು ತಿಳಿದುಕೊಂಡಿಲ್ಲ. ಏಕೆಂದರೆ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ, ದ್ವಾಪರದ ಮಾತೇ ಇಲ್ಲ. ತಂದೆಯು ತಿಳಿಸುತ್ತಾರೆ, 5000 ವರ್ಷಗಳ ಮೊದಲೂ ಸಹ ನಾನು ಬಂದು ಈ ಜ್ಞಾನವನ್ನು ನೀಡಿದ್ದೆನು, ಈ ವೃಕ್ಷದಿಂದ ಎಲ್ಲರಿಗೆ ಅರ್ಥವಾಗುತ್ತದೆ. ವೃಕ್ಷವನ್ನು ಚೆನ್ನಾಗಿ ನೋಡಿ, ಸತ್ಯಯುಗದಲ್ಲಿ ಅವಶ್ಯವಾಗಿ ದೇವಿ-ದೇವತೆಗಳ ರಾಜ್ಯವಿತ್ತು, ತ್ರೇತಾಯುಗದಲ್ಲಿ ರಾಮ-ಸೀತೆಯರ ರಾಜ್ಯವಿರುತ್ತದೆ. ತಂದೆಯು ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಬಾಬಾ ನಾವು ಮಾಯೆಯ ಜಾಲದಲ್ಲಿ ಯಾವಾಗ ಬಂಧಿತರಾದೆವೆಂದು ಮಕ್ಕಳು ಕೇಳುತ್ತಾರೆ. ಅದಕ್ಕೆ ತಂದೆಯು ದ್ವಾಪರ ಯುಗದಿಂದ ಬಂಧಿತರಾದೆವು ಎಂದು ಹೇಳುತ್ತಾರೆ. ನಂಬರ್ವಾರ್ ಆಗಿ ಅನ್ಯ ಧರ್ಮದವರು ಬರುತ್ತಾರೆ. ಈ ಲೆಕ್ಕವನ್ನು ಮಾಡುವುದರಿಂದ ಈ ಪ್ರಪಂಚದಲ್ಲಿ ನಾವು ಮತ್ತೆ ಯಾವಾಗ ಬರುತ್ತೇವೆಂಬುದನ್ನು ಅರಿತುಕೊಳ್ಳಬಹುದಾಗಿದೆ. ಶಿವ ತಂದೆಯು ತಿಳಿಸುತ್ತಾರೆ - ನಾನು 5000 ವರ್ಷಗಳ ನಂತರ ಸಂಗಮಯುಗದಲ್ಲಿ ನನ್ನ ಕರ್ತವ್ಯವನ್ನು ನಿಭಾಯಿಸಲು ಬಂದಿದ್ದೇನೆ. ಯಾರೆಲ್ಲಾ ಮನುಷ್ಯಾತ್ಮರಿದ್ದಾರೆಯೋ ಎಲ್ಲರೂ ದುಃಖಿಯಾಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಭಾರತವಾಸಿಗಳು ದುಃಖಿಯಾಗಿದ್ದಾರೆ. ಡ್ರಾಮಾನುಸಾರ ಭಾರತವನ್ನೇ ನಾನು ಸುಖಿಯನ್ನಾಗಿ ಮಾಡುತ್ತೇನೆ. ಮಕ್ಕಳು ರೋಗಿಗಳಾದರೆ ಅವರಿಗೆ ಔಷದೋಪಚಾರ ಮಾಡುವುದು ತಂದೆಯ ಕರ್ತವ್ಯವಾಗಿರುತ್ತದೆ. ಇದು ಬಹಳ ಕಠಿಣ ರೋಗವಾಗಿದೆ. ಎಲ್ಲಾ ರೋಗಗಳಿಗೂ ಮೂಲ ಈ ಪಂಚ ವಿಕಾರಗಳಾಗಿದೆ. ಇವು ಯಾವಾಗಿನಿಂದ ಆರಂಭವಾಯಿತೆಂದು ಮಕ್ಕಳು ಕೇಳುತ್ತಾರೆ. ದ್ವಾಪರದಿಂದ ಆರಂಭವಾಯಿತು, ರಾವಣನ ಮಾತನ್ನು ತಿಳಿಸಬೇಕಾಗಿದೆ. ರಾವಣನನ್ನು ಸ್ಥೂಲವಾಗಿ ನೋಡಲಾಗುವುದಿಲ್ಲ, ಬುದ್ಧಿಯಿಂದ ತಿಳಿದುಕೊಳ್ಳಬಹುದು. ಹಾಗೆಯೇ ತಂದೆಯನ್ನೂ ಸಹ ಬುದ್ಧಿಯಿಂದಲೇ ಅರಿತುಕೊಳ್ಳಲಾಗುತ್ತದೆ. ಆತ್ಮವು ಮನಸ್ಸು-ಬುದ್ಧಿಯಿಂದ ಕೂಡಿದೆ. ನಮ್ಮ ತಂದೆಯು ಪರಮಾತ್ಮನಾಗಿದ್ದಾರೆಂದು ಆತ್ಮಕ್ಕೆ ತಿಳಿದಿದೆ. ಸುಖ-ದುಃಖ, ಲೇಪಚೇಪದಲ್ಲಿ ಆತ್ಮವೇ ಬರುತ್ತದೆ. ಶರೀರವಿದ್ದಾಗ ಆತ್ಮಕ್ಕೆ ದುಃಖವಾಗುತ್ತದೆ. ನಾನು ಪರಮಾತ್ಮನಿಗೆ ದುಃಖ ಕೊಡಬೇಡಿ ಎಂದು ಹೇಳುವುದಿಲ್ಲ, ಇದು ಆತ್ಮದ ಮಾತಾಗಿದೆ. ತಂದೆಯೂ ತಿಳಿಸುತ್ತಾರೆ - ಇಲ್ಲಿ ನನ್ನ ಪಾತ್ರವೂ ಇದೆ, ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ನಾನು ಬಂದು ನನ್ನ ಪಾತ್ರವನ್ನಭಿನಯಿಸುತ್ತೇನೆ. ಯಾವ ಮಕ್ಕಳನ್ನು ನಾನು ಸುಖದಲ್ಲಿ ಕಳುಹಿಸಿದ್ದೆನೋ ಅವರು ದುಃಖಿಯಾಗಿ ಬಿಟ್ಟಿದ್ದಾರೆ. ಆದ್ದರಿಂದ ಮತ್ತೆ ಡ್ರಾಮಾನುಸಾರ ನಾನು ಬರಲೇಬೇಕಾಗುತ್ತದೆ. ಬಾಕಿ ಮೀನು-ಮೊಸಳೆ ಅವತಾರಗಳ ಮಾತುಗಳಿಲ್ಲ. ಪರಶುರಾಮನು ಕೊಡಲಿಯನ್ನು ತೆಗೆದುಕೊಂಡು ಕ್ಷತ್ರಿಯರನ್ನು ಕೊಂದನೆಂದು ಹೇಳುತ್ತಾರೆ. ಇವೆಲ್ಲವೂ ದಂತ ಕಥೆಗಳಾಗಿವೆ ಅಂದಾಗ ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ.

ಇವರು ಜಗದಂಬೆ ಮತ್ತು ಜಗತ್ಪಿತನಾಗಿದ್ದಾರೆ. ಮಾತಾಪಿತರ ದೇಶವೆಂದು ಹೇಳುತ್ತಾರಲ್ಲವೆ! ಭಾರತವಾಸಿಗಳು ನೀವೇ ಮಾತಾಪಿತ ಎಂದು ನೆನಪು ಮಾಡುತ್ತಾರೆ. ಈಗ ಅವರ ಕೃಪೆಯಿಂದ ಅಪಾರ ಸುಖವು ಅವಶ್ಯವಾಗಿ ಸಿಗುತ್ತಿದೆ ಮತ್ತೆ ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪಡೆಯುವರು. ಹೇಗೆ ಸಿನೆಮಾ ನೋಡಲು ಹೋಗುತ್ತಾರೆಂದರೆ ಫಸ್ಟ್ ಕ್ಲಾಸ್ ನ ಸ್ಥಾನವನ್ನೇ ಕಾದಿರಿಸುತ್ತಾರಲ್ಲವೆ. ತಂದೆಯೂ ಸಹ ತಿಳಿಸುತ್ತಾರೆ - ನೀವು ಬೇಕೆಂದರೆ ಸೂರ್ಯವಂಶದಲ್ಲಾದರೂ ಆಸನವನ್ನು ಕಾದಿರಿಸಿ ಅಥವಾ ಚಂದ್ರವಂಶದಲ್ಲಾದರೂ ಮಾಡಿಸಿ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುವರು ಅಂದಾಗ ತಂದೆಯು ಎಲ್ಲರ ದುಃಖವನ್ನು ಕಳೆಯಲು ಬಂದಿದ್ದಾರೆ. ರಾವಣನು ಎಲ್ಲರಿಗೂ ದುಃಖವನ್ನು ಕೊಟ್ಟಿದ್ದಾನೆ. ಯಾವುದೇ ಮನುಷ್ಯರು ಮನುಷ್ಯರ ಗತಿ-ಸದ್ಗತಿ ಮಾಡಲು ಸಾಧ್ಯವಿಲ್ಲ. ಇದು ಕಲಿಯುಗದ ಅಂತ್ಯವಾಗಿದೆ. ಗುರುಗಳು ಶರೀರವನ್ನು ಬಿಡುತ್ತಾರೆ ಮತ್ತೆ ಇಲ್ಲಿಯೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ ಅಂದಮೇಲೆ ಅವರು ಅನ್ಯರ ಸದ್ಗತಿಯನ್ನೇನು ಮಾಡುತ್ತಾರೆ! ಇಷ್ಟೆಲ್ಲಾ ಅನೇಕ ಮಂದಿ ಗುರುಗಳು ಸೇರಿ ಪತಿತ ಸೃಷ್ಟಿಯನ್ನು ಪಾವನ ಮಾಡುವರೇ? ಗೋವರ್ಧನ ಪರ್ವತವೆಂದು ಹೇಳುತ್ತಾರಲ್ಲವೆ. ಈ ಮಾತೆಯರು ಈ ಕಲಿಯುಗೀ ಪರ್ವತವನ್ನು ಸತ್ಯಯುಗವನ್ನಾಗಿ ಮಾಡುತ್ತಾರೆ. ಗೋವರ್ಧನ ಪರ್ವತದ ಪೂಜೆಯನ್ನೂ ಮಾಡುತ್ತಾರೆ, ಅದು ತತ್ವ ಪೂಜೆಯಾಗಿದೆ. ಸನ್ಯಾಸಿಗಳೂ ಸಹ ಬ್ರಹ್ಮ್ ತತ್ವವನ್ನು ನೆನಪು ಮಾಡುತ್ತಾರೆ. ಅದೇ ಪರಮಾತ್ಮ ಬ್ರಹ್ಮವೇ ಭಗವಂತನೆಂದು ತಿಳಿಯುತ್ತಾರೆ. ತಂದೆಯು ಹೇಳುತ್ತಾರೆ - ಇದಂತೂ ಭ್ರಮೆಯಾಗಿದೆ, ಅಂಡಾಕಾರದಲ್ಲಿರುತ್ತಾರೆ. ನಿರಾಕಾರಿ ವೃಕ್ಷವನ್ನು ತೋರಿಸಲಾಗಿದೆ. ಪ್ರತಿಯೊಬ್ಬರದೂ ತಮ್ಮ-ತಮ್ಮ ವಿಭಾಗವಿದೆ. ಈ ವೃಕ್ಷದ ಬುನಾದಿಯು ಭಾರತದ ಸೂರ್ಯವಂಶಿ, ಚಂದ್ರವಂಶಿ ಮನೆತನವಾಗಿದೆ, ಅದರಿಂದ ವೃದ್ಧಿಯಾಗುತ್ತದೆ. ಮುಖ್ಯವಾಗಿ ನಾಲ್ಕು ಧರ್ಮಗಳಿವೆ ಅಂದಮೇಲೆ ಯಾವ-ಯಾವ ಧರ್ಮಗಳು ಯಾವಾಗ ಬರುತ್ತವೆ? ಯಾವಾಗ ಸ್ಥಾಪನೆಯಾಗುತ್ತದೆ ಎಂದು ಲೆಕ್ಕ ಮಾಡಬೇಕು. ಹೇಗೆ ಗುರುನಾನಕರು 500 ವರ್ಷಗಳ ಹಿಂದೆ ಬಂದರು, ಹಾಗೆಂದು ಹೇಳಿ ಸಿಖ್ಖರು ಪೂರ್ಣ 84 ಜನ್ಮಗಳು ತೆಗೆದುಕೊಂಡರೆಂದು ಹೇಳುವುದಿಲ್ಲ. ಕೇವಲ ನೀವು ಬ್ರಾಹ್ಮಣರದಾಗಿದೆ ಎಂದು ತಂದೆಯು ತಿಳಿಸುತ್ತಾರೆ. ನಿಮ್ಮದೇ ಸರ್ವತೋಮುಖ ಪಾತ್ರವಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ನೀವೇ ಆಗುತ್ತೀರಿ. ಯಾರು ಮೊಟ್ಟ ಮೊದಲಿಗೆ ದೇವಿ-ದೇವತೆಗಳಾಗುತ್ತಾರೋ ಅವರೇ ಪೂರ್ಣ ಚಕ್ರವನ್ನು ಸುತ್ತುತ್ತಾರೆ.

ತಂದೆಯು ತಿಳಿಸುತ್ತಾರೆ - ನೀವು ವೇದಶಾಸ್ತ್ರಗಳನ್ನಂತೂ ಬಹಳ ಕೇಳಿದ್ದೀರಿ. ಈಗ ಈ ಜ್ಞಾನವನ್ನು ಕೇಳಿ ಮತ್ತು ನಿರ್ಣಯ ಮಾಡಿ - ಶಾಸ್ತ್ರಗಳು ಸರಿಯೋ ಅಥವಾ ಗುರುಗಳು ಹೇಳಿದುದು ಸರಿಯೋ ಅಥವಾ ತಂದೆಯು ಹೇಳುವುದು ಸರಿಯೋ? ಭಗವಂತನಿಗೆ ಸತ್ಯವೆಂದು ಹೇಳುತ್ತಾರೆ. ನಾನು ಸತ್ಯನಾಗಿದ್ದೇನೆ, ನನ್ನಿಂದ ಸತ್ಯಯುಗವು ಸ್ಥಾಪನೆಯಾಗುತ್ತದೆ ಮತ್ತು ದ್ವಾಪರದಿಂದ ಹಿಡಿದು ನೀವು ಅಸತ್ಯವನ್ನು ಕೇಳುತ್ತಾ ಬಂದಿದ್ದೀರಿ ಅದರಿಂದ ನರಕವಾಗಿ ಬಿಟ್ಟಿದೆ.

ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಗುಲಾಮನಾಗಿದ್ದೇನೆ, ಭಕ್ತಿಮಾರ್ಗದಲ್ಲಿ ನಾನು ಗುಲಾಮನಾಗಿದ್ದೇನೆ, ನಾನು ನಿಮ್ಮ ಗುಲಾಮನಾಗಿದ್ದೇನೆ ಎಂದು ನೀವು ಹಾಡುತ್ತಾ ಬಂದಿದ್ದೀರಿ. ಈಗ ನಾನು ನೀವು ಮಕ್ಕಳ ಸೇವೆಯಲ್ಲಿ ಬಂದಿದ್ದೇನೆ. ತಂದೆಗೆ ನಿರಾಕಾರಿ, ನಿರಹಂಕಾರಿ ಎಂದು ಗಾಯನ ಮಾಡಲಾಗುತ್ತದೆ ಅಂದಾಗ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳನ್ನು ಸದಾ ಸುಖಿಯನ್ನಾಗಿ ಮಾಡುವುದು ನನ್ನ ಕರ್ತವ್ಯವಾಗಿದೆ. ಗೀತೆಯಲ್ಲಿಯೂ ಇದೆ ಜನನ-ಮರಣದ ರಹಸ್ಯವನ್ನು ಭಗವಂತನು ತಿಳಿಸಿದರು...... ಬಾಕಿ ಡಮರುಗ ಇತ್ಯಾದಿಗಳನ್ನು ಬಾರಿಸುವ ಮಾತಿಲ್ಲ. ಮೊದಲು ಇಲ್ಲಿ ತಂದೆಯು ಆದಿ-ಮಧ್ಯ-ಅಂತ್ಯದ ಪೂರ್ಣ ಸಮಾಚಾರವನ್ನು ತಿಳಿಸುತ್ತಾರೆ - ಮಕ್ಕಳೇ ನೀವೆಲ್ಲರೂ ಪಾತ್ರಧಾರಿಗಳಾಗಿದ್ದೀರಿ. ನಾನು ಈ ಸಮಯದಲ್ಲಿ ಮಾಡಿ-ಮಾಡಿಸುವವನಾಗಿದ್ದೇನೆ. ನಾನು ಬ್ರಹ್ಮಾರವರಿಂದ ಸ್ಥಾಪನೆ ಮಾಡಿಸುತ್ತೇನೆ, ಉಳಿದಂತೆ ಗೀತೆಯಲ್ಲಿ ಏನೆಲ್ಲವನ್ನೂ ಬರೆದಿದ್ದಾರೆಯೋ ಆ ರೀತಿ ಇಲ್ಲ. ಈಗಂತೂ ಪ್ರತ್ಯಕ್ಷದ ಮಾತಿದೆಯಲ್ಲವೆ. ಮಕ್ಕಳಿಗೆ ಈ ಸಹಜ ಜ್ಞಾನ ಮತ್ತು ಸಹಜ ರಾಜಯೋಗವನ್ನು ಕಲಿಸುತ್ತೇನೆ, ಬುದ್ಧಿಯೋಗವನ್ನು ಜೋಡಣೆ ಮಾಡಿಸುತ್ತೇನೆ. ಯೋಗ ಮಾಡಿಸುವವರು, ಜೋಳಿಗೆಯನ್ನು ತುಂಬುವವರು, ದುಃಖವನ್ನು ಕಳೆಯುವವರು...... ಎಂದು ಹೇಳಿದ್ದಾರಲ್ಲವೆ. ಗೀತೆಯ ಪೂರ್ಣ ಅರ್ಥವನ್ನೂ ತಂದೆಯು ತಿಳಿಸುತ್ತಾರೆ. ಯೋಗವನ್ನು ಕಲಿಸುತ್ತೇನೆ ಮತ್ತು ಅವರು ಬೇರೆಯವರಿಗೆ ಕಲಿಸುವುದನ್ನೂ ಕಲಿಸಿಕೊಡುತ್ತೇನೆ. ಮಕ್ಕಳು ಯೋಗವನ್ನು ಕಲಿತು ಅನ್ಯರಿಗೂ ಕಲಿಸುತ್ತೀರಲ್ಲವೆ. ಯೋಗದಿಂದ ನಮ್ಮ ಜ್ಯೋತಿಯನ್ನು ಬೆಳಗುವವರು ಎಂದು ಹೇಳುತ್ತಾರೆ. ಇಂತಹ ಗೀತೆಯನ್ನು ಯಾರಾದರೂ ಮನೆಯಲ್ಲಿ ಕುಳಿತು ಹೇಳಿದರೆ ಪೂರ್ಣ ಜ್ಞಾನವು ಬುದ್ಧಿಯಲ್ಲಿ ತಿರುಗುವುದು. ತಂದೆಯ ನೆನಪಿನಿಂದ ಆಸ್ತಿಯ ನಶೆಯೇರುವುದು. ಕೇವಲ ಪರಮಾತ್ಮ ಅಥವಾ ಭಗವಂತ ಎಂದು ಹೇಳುವುದರಿಂದ ಬಾಯಿ ಮಧುರವಾಗುವುದಿಲ್ಲ. ತಂದೆಯೆಂದರೆ ಆಸ್ತಿ.

ಈಗ ನೀವು ಮಕ್ಕಳು ತಂದೆಯಿಂದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೇಳಿ ಮತ್ತೆ ಅನ್ಯರಿಗೂ ತಿಳಿಸುತ್ತೀರಿ. ಇದನ್ನೇ ಶಂಖ ಧ್ವನಿ ಎಂದು ಹೇಳಲಾಗುವುದು. ನಿಮ್ಮ ಕೈಯಲ್ಲಿ ಯಾವುದೇ ಪುಸ್ತಕ ಇತ್ಯಾದಿಗಳಿಲ್ಲ. ಮಕ್ಕಳು ಕೇವಲ ಧಾರಣೆ ಮಾಡಬೇಕಾಗುತ್ತದೆ. ನೀವು ಸತ್ಯ ಆತ್ಮಿಕ ಬ್ರಾಹ್ಮಣರು, ಆತ್ಮಿಕ ತಂದೆಯ ಮಕ್ಕಳಾಗಿದ್ದೀರಿ. ಸತ್ಯ ಗೀತೆಯಿಂದ ಭಾರತವು ಸ್ವರ್ಗವಾಗುತ್ತದೆ. ಅವರಂತೂ ಕೇವಲ ಕಥೆಗಳನ್ನು ಬರೆದಿದ್ದಾರೆ, ನೀವೆಲ್ಲರೂ ಪಾರ್ವತಿಯರಾಗಿದ್ದೀರಿ. ಅವರಿಗೆ ಈ ಅಮರಕಥೆಯನ್ನು ತಿಳಿಸುತ್ತಿದ್ದೇನೆ. ನೀವೆಲ್ಲರೂ ದ್ರೌಪದಿಯರಾಗಿದ್ದೀರಿ, ಅಲ್ಲಿ ಯಾರೂ ಪತಿತರಾಗುವುದಿಲ್ಲ. ಅಂದಮೇಲೆ ಅಲ್ಲಿ ಹೇಗೆ ಜನ್ಮವಾಗುತ್ತದೆ ಎಂದು ಕೇಳುತ್ತಾರೆ. ಅರೆ! ಅದು ನಿರ್ವಿಕಾರಿ ಪ್ರಪಂಚವೆಂದರೆ ಅಲ್ಲಿ ವಿಕಾರವಿರಲು ಹೇಗೆ ಸಾಧ್ಯ. ಯೋಗಬಲದಿಂದ ಮಕ್ಕಳು ಹೇಗೆ ಜನಿಸುತ್ತಾರೆಂಬುದು ನಿಮಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವೆ! ನೀವು ವಾದ ಮಾಡುತ್ತೀರಿ ಆದರೆ ಇವಂತೂ ಶಾಸ್ತ್ರಗಳ ಮಾತಾಗಿದೆಯಲ್ಲವೆ. ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ, ಇದು ವಿಕಾರೀ ಪ್ರಪಂಚವಾಗಿದೆ. ನನಗೆ ಗೊತ್ತಿದೆ, ಡ್ರಾಮಾನುಸಾರ ಮಾಯೆಯು ಮತ್ತೆ ನಿಮ್ಮನ್ನು ದುಃಖಿಯನ್ನಾಗಿ ಮಾಡುತ್ತದೆ. ನಾನು ಕಲ್ಪ-ಕಲ್ಪವೂ ನನ್ನ ಕರ್ತವ್ಯ ಪಾಲನೆ ಮಾಡಲು ಬರುತ್ತೇನೆ. ನನಗೆ ಗೊತ್ತಿದೆ, ಕಲ್ಪದ ಹಿಂದಿನ ಅನನ್ಯ ಮಕ್ಕಳೇ ಬಂದು ತನ್ನ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಅದರ ಚಿಹ್ನೆಗಳನ್ನೂ ತೋರಿಸುತ್ತಾರೆ. ಅದೇ ಮಹಾಭಾರತ ಯುದ್ಧವಾಗಿದೆ. ನೀವು ಪುನಃ ದೇವಿ-ದೇವತಾ ಅಥವಾ ಸ್ವರ್ಗದ ಮಾಲೀಕರಾಗುವ ಪುರುಷಾರ್ಥ ಮಾಡಬೇಕಾಗಿದೆ. ಇದರಲ್ಲಿ ಯಾವುದೇ ಸ್ಥೂಲ ಯುದ್ಧದ ಮಾತಿಲ್ಲ ಹಾಗೂ ಅಸುರರು ಮತ್ತು ದೇವತೆಗಳ ಯುದ್ಧವೂ ಆಗಲಿಲ್ಲ. ಯುದ್ಧ ಮಾಡಿಸಲು ಅಲ್ಲಿ ಮಾಯೆಯೇ ಇರುವುದಿಲ್ಲ. ಅರ್ಧಕಲ್ಪದವರೆಗೆ ಯಾವುದೇ ಯುದ್ಧ, ಯಾವುದೇ ರೋಗ, ದುಃಖ-ಅಶಾಂತಿ ಏನೂ ಇರುವುದಿಲ್ಲ. ಅರೆ! ಅಲ್ಲಂತೂ ಸದಾ ಸುಖ, ಸದಾ ವಸಂತ ಋತುವೇ ಇರುತ್ತದೆ. ಆಸ್ಪತ್ರೆಯೂ ಇರುವುದಿಲ್ಲ, ಬಾಕಿ ಶಾಲೆಯಲ್ಲಿ ಓದುವುದಂತೂ ಇದ್ದೇ ಇರುತ್ತದೆ. ಈಗ ನೀವು ಪ್ರತಿಯೊಬ್ಬರೂ ಇಲ್ಲಿಂದ ಆಸ್ತಿಯನ್ನು ತೆಗೆದುಕೊಂಡು ಹೋಗುತ್ತೀರಿ. ಮನುಷ್ಯರು ವಿದ್ಯೆಯಿಂದ ತಮ್ಮ ಕಾಲಿನ ಮೇಲೆ ತಾವು ನಿಲ್ಲುತ್ತಾರೆ. ಇದಕ್ಕೆ ಒಂದು ಕಥೆಯೂ ಇದೆ - ನೀವು ಯಾರ ಭಾಗ್ಯದಲ್ಲಿ ತಿನ್ನುತ್ತೀರಿ ಎಂದು ಯಾರೋ ಕೇಳಿದರು, ಅದಕ್ಕೆ ಅವರು ನಾನು ನನ್ನ ಅದೃಷ್ಟದಲ್ಲಿರುವುದನ್ನು ತಿನ್ನುತ್ತೇನೆ ಎಂದು ಹೇಳುತ್ತಾರೆ. ಅದು ಮಿತವಾದ ಅದೃಷ್ಟವಾಗಿದೆ. ಈಗ ಇಲ್ಲಿ ನೀವು ತಮ್ಮ ಅಪರಿಮಿತವಾದ ಅದೃಷ್ಟವನ್ನು ರೂಪಿಸಿಕೊಳ್ಳುತ್ತೀರಿ. ಇಂತಹ ಅದೃಷ್ಟವನ್ನು ರೂಪಿಸಿಕೊಳ್ಳುತ್ತೀರಿ, ಇದರಿಂದ 21 ಜನ್ಮಗಳು ತಮ್ಮದೇ ರಾಜ್ಯಭಾಗ್ಯವನ್ನು ಭೋಗಿಸುತ್ತೀರಿ. ಇದು ಬೇಹದ್ದಿನ ಸುಖದ ಆಸ್ತಿಯಾಗಿದೆ. ಈಗ ನೀವು ಮಕ್ಕಳು ಅಂತರವನ್ನು ಬಹಳ ಚೆನ್ನಾಗಿ ಅರಿತುಕೊಂಡಿದ್ದೀರಿ, ಭಾರತವು ಎಷ್ಟೊಂದು ಸುಖಿಯಾಗಿತ್ತು, ಈಗ ಯಾವ ಸ್ಥಿತಿಯಾಗಿದೆ! ಯಾರು ಕಲ್ಪದ ಹಿಂದೆ ರಾಜ್ಯಭಾಗ್ಯವನ್ನು ತೆಗೆದುಕೊಂಡಿರುವರೋ ಅವರೇ ಈಗಲೂ ತೆಗೆದುಕೊಳ್ಳುತ್ತಾರೆ, ನಾಟಕದಲ್ಲಿದ್ದರೆ ಸಿಗುವುದೆಂದಲ್ಲ. ಮತ್ತೆ ಹಸಿವಿನಿಂದ ಸಾಯಬೇಕಾಗುತ್ತದೆ. ಆದ್ದರಿಂದ ಈ ನಾಟಕದ ರಹಸ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕಾಗಿದೆ. ಶಾಸ್ತ್ರಗಳಲ್ಲಿ ಕೆಲಕೆಲವರು ಕೆಲಕೆಲವೊಂದು ಆಯಸ್ಸನ್ನು ಬರೆದು ಬಿಟ್ಟಿದ್ದಾರೆ. ಅನೇಕಾನೇಕ ಮತ-ಮತಾಂತರಗಳಿವೆ. ನಾವಂತೂ ಸದಾ ಸುಖಿಯಾಗಿದ್ದೇವೆ ಎಂದು ಹೇಳುತ್ತಾರೆ. ಅರೆ! ನೀವೆಂದೂ ರೋಗಿಯಾಗುವುದಿಲ್ಲವೆ? ಅದಕ್ಕೆ ಅವರು ರೋಗ ಇತ್ಯಾದಿಯಂತೂ ಶರೀರಕ್ಕೆ ಬರುತ್ತದೆ. ಆತ್ಮವು ನಿರ್ಲೇಪವಾಗಿದೆ ಎಂದು ಹೇಳುತ್ತಾರೆ. ಅರೆ! ಏಟು ಬೀಳುತ್ತದೆಯೆಂದರೆ ಆತ್ಮಕ್ಕೆ ದುಃಖವಾಗುತ್ತದೆಯಲ್ಲವೆ. ಇವು ಬಹಳ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಇದು ಶಾಲೆಯಾಗಿದೆ, ಒಬ್ಬರೇ ಶಿಕ್ಷಕರು ಓದಿಸುತ್ತಾರೆ. ಜ್ಞಾನವು ಒಂದೇ ಆಗಿದೆ, ನರನಿಂದ ನಾರಾಯಣರಾಗುವ ಗುರಿ-ಧ್ಯೇಯವೂ ಒಂದೇ ಆಗಿದೆ. ಯಾರು ಅನುತ್ತೀರ್ಣರಾಗುವರೋ ಅವರು ಚಂದ್ರವಂಶದಲ್ಲಿ ಬರುತ್ತಾರೆ. ದೇವತೆಗಳಿದ್ದಂತಹ ಸಮಯದಲ್ಲಿ ಕ್ಷತ್ರಿಯರಿರುವುದಿಲ್ಲ. ಕ್ಷತ್ರಿಯರಿದ್ದಾಗ ವೈಶ್ಯರಿರುವುದಿಲ್ಲ, ವೈಶ್ಯರಿದ್ದಾಗ ಶೂದ್ರರಿರುವುದಿಲ್ಲ. ಇವೆಲ್ಲವೂ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ಮಾತೆಯರಿಗೆ ಇದು ಅತಿ ಸಹಜವಾಗಿದೆ. ಒಂದೇ ಪರೀಕ್ಷೆಯಾಗಿದೆ, ತಡವಾಗಿ ಬರುವವರು ಹೇಗೆ ಓದುತ್ತಾರೆಂದು ತಿಳಿಯಬೇಡಿ. ಈಗಂತೂ ಹೊಸಬರೇ ಇನ್ನೂ ತೀಕ್ಷ್ಣವಾಗಿ ಹೋಗುತ್ತಾರೆ. ಪ್ರಾಕ್ಟಿಕಲ್ನಲ್ಲಿ ಅಂತಹವರಿದ್ದಾರೆ. ಉಳಿದಂತೆ ಮಾಯಾ ರಾವಣನ ಯಾವುದೇ ರೂಪವಿಲ್ಲ. ಇವರಲ್ಲಿ ಕಾಮದ ಭೂತವಿದೆಯೆಂದು ಹೇಳುತ್ತಾರೆ. ಬಾಕಿ ರಾವಣನ ಯಾವುದೇ ಪ್ರತಿಮೆಯಾಗಲಿ, ಶರೀರವಾಗಲಿ ಇಲ್ಲ.

ಒಳ್ಳೆಯದು, ಎಲ್ಲಾ ಮಾತುಗಳ ಸ್ಯಾಕ್ರೀನ್ ಮನ್ಮನಾಭವ ಆಗಿದೆ. ನನ್ನನ್ನು ನೆನಪು ಮಾಡಿದರೆ ಈ ಯೋಗಾಗ್ನಿಯಿಂದ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಮಾರ್ಗದರ್ಶಕನಾಗಿ ಬರುತ್ತಾರೆ. ತಿಳಿಸುತ್ತಾರೆ - ಮಕ್ಕಳೇ, ನಾನಂತೂ ನೀವು ಮಕ್ಕಳಿಗೆ ಸನ್ಮುಖದಲ್ಲಿ ಓದಿಸುತ್ತಿದ್ದೇನೆ, ಕಲ್ಪ-ಕಲ್ಪವೂ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಪಾರಲೌಕಿಕ ತಂದೆಯೇ ತಿಳಿಸುತ್ತಿದ್ದಾರೆ - ನಾನು ನೀವು ಮಕ್ಕಳ ಸಹಯೋಗದಿಂದ ನನ್ನ ಜವಾಬ್ದಾರಿಯನ್ನು ನಿಭಾಯಿಸಲು ಬಂದಿದ್ದೇನೆ. ಸಹಯೋಗ ಕೊಡುತ್ತೀರಿ ಆಗಲೇ ನೀವೂ ಸಹ ಪದವಿಯನ್ನು ಪಡೆಯುವಿರಿ. ನಾನು ಎಷ್ಟು ದೊಡ್ಡ ತಂದೆಯಾಗಿದ್ದೇನೆ, ಇಷ್ಟು ದೊಡ್ಡ ಯಜ್ಞವನ್ನು ರಚಿಸಿದ್ದೇನೆ. ಬ್ರಹ್ಮಾ ಮುಖವಂಶಾವಳಿಗಳಾದ ನೀವೆಲ್ಲರೂ ಬ್ರಾಹ್ಮಣ-ಬ್ರಾಹ್ಮಣಿಯರು ಸಹೋದರ-ಸಹೋದರಿಯರಾದಿರಿ. ಸಹೋದರ-ಸಹೋದರಿಯಾದಾಗ ಸ್ತ್ರೀ-ಪುರುಷನ ದೃಷ್ಟಿಯು ಬದಲಾಗುವುದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಬ್ರಾಹ್ಮಣ ಕುಲಕ್ಕೆ ಕಳಂಕ ತರಬಾರದು. ಇವು ಪವಿತ್ರರಾಗಿರುವ ಯುಕ್ತಿಗಳಾಗಿವೆ, ಇದು ಹೇಗಾಗುವುದು, ಈ ರೀತಿಯಾಗಲು ಸಾಧ್ಯವಿಲ್ಲ. ಒಟ್ಟಿಗೆ ಇದ್ದು ನಡುವೆ ಬೆಂಕಿ ಹತ್ತಿಕೊಳ್ಳದಿರಲು ಹೇಗೆ ಸಾಧ್ಯವೆಂದು ಮನುಷ್ಯರು ಹೇಳುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಒಟ್ಟಿಗೆ ಇದ್ದರೂ ಸಹ ನಡುವೆ ಜ್ಞಾನದ ಕತ್ತಿಯಿರುವ ಕಾರಣ ಎಂದೂ ಬೆಂಕಿ ಬೀಳಲು ಸಾಧ್ಯವಿಲ್ಲ. ಆದರೆ ಇಬ್ಬರೂ ಮನ್ಮನಾಭವ ಆಗಿರಬೇಕು. ಶಿವ ತಂದೆಯನ್ನು ನೆನಪು ಮಾಡುತ್ತಿರಬೇಕು, ತಮ್ಮನ್ನು ಬ್ರಾಹ್ಮಣರೆಂದು ತಿಳಿದಾಗ ಮಾತ್ರ ಬೆಂಕಿ (ವಿಕಾರದ ಬೆಂಕಿ) ಬೀಳುವುದಿಲ್ಲ. ಮನುಷ್ಯರಂತೂ ಈ ಮಾತುಗಳನ್ನು ಅರಿತುಕೊಳ್ಳದ ಕಾರಣ ಬಹಳಷ್ಟು ಏರುಪೇರು ಮಾಡುತ್ತಾರೆ, ನಿಂದನೆಯನ್ನೂ ಸಹನೆ ಮಾಡಬೇಕಾಗುತ್ತದೆ. ಕೃಷ್ಣನಿಗೆ ನಿಂದನೆ ಮಾಡಲು ಸಾಧ್ಯವೆ! ಕೃಷ್ಣನು ಹೀಗೆ ಬಂದು ಬಿಟ್ಟರೆ ವಿದೇಶಗಳಿಂದ ಒಮ್ಮೆಲೆ ವಿಮಾನದಲ್ಲಿ ಓಡಿಕೊಂಡು ಬಂದು ಬಿಡುತ್ತಾರೆ. ಸಮೂಹವೇ ಸೇರಿ ಬಿಡುತ್ತದೆ. ಭಾರತದಲ್ಲಿ ಏನಾಗಿ ಬಿಡುವುದೋ ಗೊತ್ತಿಲ್ಲ.

ಒಳ್ಳೆಯದು - ಇಂದು ಭೋಗದ ದಿನವಾಗಿದೆ. ಇದು (ಸಂಗಮಯುಗ) ತಂದೆಯ ಮನೆ ಮತ್ತು ಅದು (ಸತ್ಯಯುಗ) ಮಾವನ ಮನೆಯಾಗಿದೆ. ಸಂಗಮಯುಗದಲ್ಲಿಯೇ ವಾರ್ತಾಲಾಪ ನಡೆಯುತ್ತದೆ, ಇದನ್ನು ಕೆಲವರು ಜಾದು ಎಂದು ತಿಳಿಯುತ್ತಾರೆ. ಈ ಸಾಕ್ಷಾತ್ಕಾರವೇನೆಂಬುದನ್ನು ತಂದೆಯು ತಿಳಿಸಿದ್ದಾರೆ, ಭಕ್ತಿಮಾರ್ಗದಲ್ಲಿ ಹೇಗೆ ಸಾಕ್ಷಾತ್ಕಾರಗಳಾಗುತ್ತವೆಯೋ ಹಾಗೆಯೇ ಇಲ್ಲಿಯೂ ಆಗುತ್ತವೆ. ಇದರಲ್ಲಿ ಸಂಶಯ ಬುದ್ಧಿಯವರಾಗಬಾರದು. ಇದೊಂದು ಪದ್ಧತಿಯಾಗಿದೆ, ಶಿವ ತಂದೆಯ ಭಂಡಾರವಾಗಿರುವುದರಿಂದ ಅವರನ್ನು ನೆನಪು ಮಾಡಿ ಭೋಗವನ್ನಿಡಬೇಕು. ಯೋಗದಲ್ಲಿರುವುದಂತೂ ಒಳ್ಳೆಯದೇ ಆಗಿದೆ, ಇದರಿಂದ ತಂದೆಯ ನೆನಪಿರುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸ್ವಯಂನ್ನು ಬ್ರಹ್ಮಾ ಮುಖವಂಶಾವಳಿ ಎಂದು ತಿಳಿದು ಪಕ್ಕಾ ಪವಿತ್ರ ಬ್ರಾಹ್ಮಣರಾಗಬೇಕಾಗಿದೆ. ಎಂದೂ ತಮ್ಮ ಈ ಬ್ರಾಹ್ಮಣ ಕುಲಕ್ಕೆ ಕಳಂಕ ತರಬಾರದು.

2. ತಂದೆಯ ಸಮಾನ ನಿರಾಕಾರಿ, ನಿರಹಂಕಾರಿಗಳಾಗಿ ತಮ್ಮ ಕರ್ತವ್ಯವನ್ನು ಪೂರ್ಣ ಮಾಡಬೇಕಾಗಿದೆ. ಆತ್ಮೀಯ ಸೇವೆಯಲ್ಲಿ ತತ್ಫರರಾಗಿರಬೇಕಾಗಿದೆ.

ವರದಾನ:
ಸೇವೆಗಳ ಪ್ರವೃತ್ತಿಯಲ್ಲಿರುತ್ತಾ ಮಧ್ಯ-ಮಧ್ಯದಲ್ಲಿ ಏಕಾಂತವಾಸಿಗಳಾಗುವಂತಹ ಅಂರ್ತಮುಖಿ ಭವ.

ಸೈಲೆನ್ಸ್ ನ ಶಕ್ತಿಯ ಪ್ರಯೋಗ ಮಾಡುವುದಕ್ಕಾಗಿ ಅಂರ್ತಮುಖಿ ಮತ್ತು ಏಕಾಂತವಾಸಿಗಳಾಗುವ ಆವಶ್ಯಕತೆಯಿದೆ. ಕೆಲವು ಮಕ್ಕಳು ಹೇಳುತ್ತಾರೆ, ಅಂರ್ತಮುಖಿ ಸ್ಥಿತಿಯ ಅನುಭವ ಮಾಡುವ ಹಾಗೂ ಏಕಾಂತವಾಸಿಗಳಾಗಲು ಸಮಯವೇ ಸಿಗುವುದಿಲ್ಲ. ಏಕೆಂದರೆ ಸೇವೆಯ ಪ್ರವೃತ್ತಿ, ವಾಣಿಯ ಶಕ್ತಿಯ ಪ್ರವೃತ್ತಿ ಬಹಳಷ್ಟು ಹೆಚ್ಚಾಗಿದೆ ಎಂದು. ಆದರೆ ಅದಕ್ಕಾಗಿ ಒಟ್ಟಿಗೆ ಅರ್ಧ ಘಂಟೆ ಅಥವಾ ಒಂದು ಘಂಟೆ ತೆಗೆಯುವ ಬದಲು ಮಧ್ಯ-ಮಧ್ಯದಲ್ಲಿ ಸ್ವಲ್ಪ ಸಮಯವಾದರೂ ತೆಗೆದಿರಾದರೆ ಶಕ್ತಿಶಾಲಿ ಸ್ಥಿತಿ ಆಗಿ ಬಿಡುವುದು.

ಸ್ಲೋಗನ್:
ಬ್ರಾಹ್ಮಣ ಜೀವನದಲ್ಲಿ ಯುದ್ಧ ಮಾಡುವ ಬದಲು ಮೋಜನ್ನಾಚರಿಸಿ ಆಗ ಕಷ್ಟವಾಗಿರುವುದು ಸಹಾ ಸಹಜವಾಗಿ ಬಿಡುವುದು.